ಆಂಗ್ಲೋಸ್ಯಾಕ್ಸನರು
ಬ್ರಿಟನ್ನಿನಲ್ಲಿ ರೋಮನರ ಆಧಿಪತ್ಯ ಕಳೆದ ಮೇಲೆ, ಜರ್ಮನಿಯಿಂದ ಬಂದು ನೆಲಸಿದ ಜನ.  ಆಂಗ್ಲರು ಮತ್ತು ಸ್ಯಾಕ್ಸನರು ಎಂಬ ಎರಡು ಜನಾಂಗದವರ ಮಿಲನದಿಂದ ಆದ ಜನಾಂಗವಿದು. ಇಂಗ್ಲೆಂಡಿನ ಪೂರ್ವ, ಮಧ್ಯ ಮತ್ತು ಉತ್ತರದ ಭಾಗಗಳಲ್ಲಿ ನೆಲೆಸಿ ಆಂಗ್ಲರು ಪೂರ್ವಆಂಗ್ಲಿಯ, ಮರ್ಸಿಯ, ನಾರ್ದಂಬ್ರಿಯ ಮುಂತಾದ ರಾಜ್ಯಗಳನ್ನು ಕಟ್ಟಿಕೊಂಡರು.  ಜರ್ಮನಿಯಲ್ಲಿ ಆಂಗ್ಲರ ನೆರೆಯಲ್ಲೆ ಇದ್ದ ಸ್ಯಾಕ್ಸನರು ಕ್ರಿ.ಶ. ಐದನೆಯ ಶತಮಾನದಲ್ಲಿ ಇಂಗ್ಲೆಂಡಿಗೆ ಬಂದು ನೆಲೆಸಿ ಸಸೆಕ್ಸ್, ವೆಸೆಕ್ಸ್ ಮತ್ತು ಎಸೆಕ್ಸ್ ಎಂಬ ರಾಜ್ಯಗಳನ್ನು ಕಟ್ಟಿದರು. ಜ್ಯೂಟರು ಬಂದು ಕೆಂಟ್ ಪ್ರಾಂತ್ಯದಲ್ಲಿ ನೆಲಸಿದರು. ಮುಂದೆ ಡೇನರು, ನಾರ್ಮನ್ನರು ಮುಂತಾದವರೂ ಬಂದರು. ಇವರೆಲ್ಲ ಪೂರ್ವದಿಂದಲೂ ಇಂಗ್ಲೆಂಡಿನಲ್ಲಿ ನೆಲಸಿದ್ದ ಕೆಲ್ಟ್‍ಜನರೊಂದಿಗೆ ಬೆರೆತುಹೋದರು. ಮುಂದೆ ಆಂಗ್ಲೋಸ್ಯಾಕ್ಸನ್ ಎಂಬ ಹೆಸರು ಹನ್ನೊಂದನೆಯ ಶತಮಾನದಲ್ಲಿ ಇಂಗ್ಲೆಂಡಿಗೆ ಬಂದು ರಾಜ್ಯ ಸ್ಥಾಪಿಸಿದ ನಾರ್ಮನರಿಗೇ ಅಲ್ಲದೆ ಹಿಂದೆ ಇಂಗ್ಲೆಂಡಿನಲ್ಲಿದ್ದ ಎಲ್ಲ ಜನರಿಗೂ ಅನ್ವಯಿಸುವಂತಾಯಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ